Feed on
Posts
Comments

ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ದಿಗಂತದಾಚೆಗೆ ದೊರೆಯಬಹುದಾದ ಅನುಭೂತಿ, ಸೃಷ್ಟಿಯ ಸುಂದರ ದೃಶ್ಯಾವಳಿಗಳ ಮುಖವಾಣಿ, ಬದುಕು ಮತ್ತದರ ಬವಣೆಗಳನ್ನು ಮರೆಯಿಸುವ ತಾಕತ್ತುಳ್ಳ ಜಾದೂಗಾರ…ಮತ್ತಿನ್ನೇನೋ… 
ಅದು ಭಾವನೆಗಳ ಕೇಂದ್ರವೂ ಹೌದು ಭಕುತಿಯದ್ದೂ ಸರಿ.  ಮನುಷ್ಯ ಮತ್ತು ಮಳೆಯ ನಡುವಿನ ನಂಟು ಕೇವಲ ಕನಸು, ಕನವರಿಕೆ, ನೆನಪುಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ಜೀವಂತಿಕೆಯ, ಉಮೇದಿನ ಚಿಲುಮೆ. ಭೂಮಿಯ ಕ್ಯಾನ್‌ವಾಸ್ ಮೇಲೆ ಮುಗಿಲ ಕುಂಚ ಚಿಮುಕಿಸುವ ಬಣ್ಣದ ಗೊಂಚಲು. 
ವರ್ಷ ಋತುವಿನ ಮೊದಲ ಮೋಡ ಆಗಸದಲ್ಲಿ ಇಣಿಕಿದ್ದನ್ನು ಕಂಡು ಖುಷಿ ಪಡದ ಮಂದಿಯಿದ್ದಾರೆಯೇ? ಮಂದಿಯ ಮಾತು ಬಿಡಿ. ಮೊದಲ ಮಳೆಯ ಮುಂಚಿನ ಹನಿಗೆ ಚಿಪ್ಪಿನೊಳಗಣ ಮೆದು ಜೀವಿಯೂ ಉಸಿರು ಬಿಗಿ ಹಿಡಿದು ಬಾಯಿ ಬಿಡುತ್ತಂತೆ! ಉಳುವ ಯೋಗಿ ಮತ್ತವನ ಹೊಲವೂ ಬಾಯ್ಬಿಟ್ಟು ನಿಂತು ಕಾಯುವವರ ಸಾಲಿಗೆ ಸೇರಿಕೊಳ್ಳುತ್ತದೆ. ಮಳೆ, ಮತ್ತದು ಹಿಡಿಯುವ ಮಗುರೂಪಿ ರಚ್ಚೆ ತುಸು ಬೇಗನೇ ಕಿರಿ ಕಿರಿ ಹುಟ್ಟಿಸುತ್ತದಾದರೂ ಅದು ಉಳಿದೆರಡು ಕಾಲಗಳ ಬೇಸರಕ್ಕೆ ಸಮವಲ್ಲ.     
ಬೇಸಿಗೆಯ ಬಿಸಿಲಿನಲ್ಲಿ ಕಾದು, ಬಿರುಕಾಗಿ ನಿಂತ ನೆಲದ ಮುಕ್ತಿಗೆ ವರುಣನ ಆಗಮನವಾಗಲೇ ಬೇಕು. ಮೊದಲ ಮಳೆಗೆ ಮಿದುವಾಗುವ ನೆಲವು ಚಿಮ್ಮಿಸುವ ಘಮ್ಮನೆ ವಾಸನೆಯೂ ಬಲು ಹಿತ. ಅಂದ ಹಾಗೆ ಮಳೆಯ  ವೈಖರಿ ನಿಖರವೇನಲ್ಲ. ಮಳೆಯೆಂಬುದು ಒಂದೆಡೆ ತಲೆದೂಗಿಸುವ ಭಾವಗೀತೆ, ಮತ್ತೊಂದೆಡೆ ಮೈ ಮರೆಯಿಸುವ ಶಾಸ್ತ್ರೀಯ, ಇನ್ನೊಂದೆಡೆ ಅಬ್ಬರಿಸುವ, ಹುಚ್ಚೆಬ್ಬಿಸುವ, ಕುಣಿಸುವ ವೆಸ್ಟರ್ನ್ ಕೂಡ!
ಬಯಲು ಸೀಮೆಯ ಮಳೆ ಪ್ರಕೃತಿಯ ಪೊರೆಯುವ ಉದ್ದೇಶವಿರುವ ತುಂತುರಾಗಬಹುದಷ್ಟೇ. ಆದರೆ ಮಲೆನಾಡಿನ ಮಳೆಯ ಆರ್ಭಟ ಬಲು ಜೋರು.
ತೀರ್ಥಳ್ಳಿ ಗೌಡ, ಭಟ್ಟರ ಅಡಿಕೆ ತೋಟಗಳ ಬೇಲಿ ತಡಿಕೆ
ದಾಟಿ ಬುಡದಡಿಯ ಮೌನದ ಮಡಿಕೆ
ಗಳ ಮಡಿಗೊಳಿಸಿ ಶಬ್ದದಿಂದ
ಕಬ್ಬು ಭತ್ತವ ಥಳಿಸಿ,
ಬೆಟ್ಟಗಳನಳಿಸಿ,
ಸೋಂಭೇರಿ ಬಿಸಿಲ ಹೊಡೆದಟ್ಟಿ
ಬಾನಗಲ ಬಿಡಾರಗಳ ಕಟ್ಟಿ…
ಇದು ನಿಸಾರರು ಕಂಡ ಮಲೆನಾಡಿನ ಸಂಜೆ ಮಳೆ. ಭೋರಿಡುವ ಗಾಳಿ, ಗುಡುಗಿ ನಡುಗಿಸುವ ಗುಡುಗು, ಬಾನು-ಭೂಮಿಯನ್ನು ಒಂದಾಗಿಸುವ ಕೋಲ್ಮಿಂಚು, ಛಳ್ಳನೆ ಬೆಳಗುವ ಸಿಡಿಲು, ರೇಜಿಗೆ ಹುಟ್ಟಿಸುವ ಕಚ-ಪಿಚ ಕೆಸರು, ವಾರಕ್ಕೊಮ್ಮೆ ಇಣುಕಿದರೂ ಪ್ರಖರತೆ ಮರೆತ ಸೂರ್ಯ, ಮಳೆಗಾಲ ಬಂದೊಂಡನೆ ವರ್ಷದ ರಜೆ ಹಾಕಿ ಹೊರಡುವ ವಿದ್ಯುತ್… ಇವೆಲ್ಲಾ ಮಳೆಗಾಲದ ಮಲೆನಾಡಿನ ನಿತ್ಯ ಸ್ಥಿಥಿಗಥಿಗಳು. ಅಂತೆಯೇ ಮಳೆಯಿಂದ ರಸ್ತೆಯ ಇಕ್ಕೆಲಗಳ ಕಾಲುವೆಗಳಲ್ಲಿ ತುಂಬಿ ಹರಿಯುವ, ಕೆಂಪು ವರ್ಣದ ನೀರೆಬ್ಬಿಸುವುದು ಜುಳು ಜುಳು ನಾದವನ್ನಲ್ಲ, ಅಬ್ಬರವನ್ನ! ಆದರೆ ಈ ಎಲ್ಲಾ ಸಣ್ಣ ಪುಟ್ಟ ಕಷ್ಟಗಳು ಮಧುರಾತಿ ಮಧುರ ಸಂವೇದನೆಗೆ ಸಹಕಾರಿಗಳು. ಏತನ್ಮಧ್ಯೆ ಮಳೆಯೊಂದಿಗೇ ಪುನಃ ಚಾಲೂ ಆಗುವ ನಾಡೆಂಚಿನ ಶಾಲೆಗಳಿಗೆ ಪುಟ್ಟ ಬಣ್ಣದ ಛತ್ರಿ, ರೇನ್ ಕೋಟ್‌ನೊಡನೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕುವ ಪುಟಾಣಿಗಳು, ಕಂಬಳಿ ಹೊದ್ದು ಹಸಿರ ಬೆಟ್ಟದಲ್ಲಿ ದನ ಮೇಯಿಸುವ ಬಗೆ, ಸಂಜೆಯಾದೊಡನೆ ಗದ್ದಲವೆಬ್ಬಿಸುವ ಮಳೆ ಹುಳುಗಳ ವಾದ್ಯವೃಂದ! ಕಲ್ಪನೆಯೇ ನೆನಪುಗಳನ್ನು ಕೆದಕುವ ಕೆಲಸಕ್ಕೆ ಕೈ ಹಚ್ಚುತ್ತದಲ್ಲವಾ? ಅದೇ ಮಳೆಯ, ಅದರಲ್ಲೂ ಮಲೆನಾಡ ಮಳೆಯ ಕರಾಮತ್ತು. 
    
ಛೇ! ಎನ್ನಿಸುವ ಬೇಸರದ ನಡುವೆ, ಹೊರಗೆ ಜಿಟಿ ಜಿಟಿ ಮಳೆ ಹೊಯ್ಯುತ್ತಿರುವಾಗ, ಅಮ್ಮ ಮಾಡಿಕೊಟ್ಟ ಬೆಚ್ಚಗಿನ ಹಬೆಯಾಡುವ ಕಾಫಿ ಸೇವನೆಯ ಅದ್ಭುತ ಅನುಭವ ಮಳೆಗಾಲದಲ್ಲಷ್ಟೇ ಸಾಧ್ಯ ತಾನೇ? ಹಳೆಯ ನೋಟ್ ಬುಕ್ಕಿನ ಒಂದೊಂದೇ ಪುಟವನ್ನು ಕತ್ತರಿಸಿ, ಒಂದು ಕಡೆ ಊನವಾದ ದೋಣಿ ಮಾಡಿ ಅದರೊಳಗೊಂದು ಚಿಕ್ಕ ಕಲ್ಲಿಟ್ಟು ಹರಿಯುವ ನೀರಿನಲ್ಲಿ ತೇಲಿಬಿಡುವ ಆಸೆಯೂ ಮಳೆಯೊಂದಿಗೆ ಮತ್ತೆ ಕುಡಿಯೊಡೆಯುತ್ತದೆ. 
ಸುರಿಯುವುದರೊಂದಿಗೆ ಮನಸುಗಳನ್ನೂ ಒದ್ದೆ ಮಾಡುವ ಮಳೆಯೆಂಬ ಲಗಾಟಿಕೋರನೆಬ್ಬಿಸುವ ದಾಂಧಲೆಗೂ ಲೆಕ್ಕವಿಲ್ಲವೆನ್ನಿ! ಆದುದರಿಂದಲೇ ಮಳೆ ಕೆಲವೊಮ್ಮೆ ಯಾರಿಗೂ ಬೇಡದ, ಎಲ್ಲರೂ ತೆಗಳುವ ಬಿಕನಾಶಿಯಾಗಿಬಿಡುತ್ತದೆ. 
ಕಂಪೆಬ್ಬಿಸುವ ವರ್ಷಧಾರೆಗೊಂದು ಚರಣ ಹಾಡುತ್ತಾ, ಮೈ ಮನಸುಗಳನ್ನು ಆರ್ದ್ರಗೊಳಿಸುವ ಮಳೆ ಸುರಿವ ರೀತಿಗೆ ಅದರ ಬೆರಗಿಗೆ ಬಾಗುತ್ತಾ, ಸೃಷ್ಟಿಯ ಸುಂದರ ರೂಪಕಗಳ ಅಭಿವ್ಯಕ್ತಿಯಲ್ಲಿ ಚಿಣ್ಣಾಟವಾಡುವ ಮಗುವಾಗುತ್ತಾ, ಹರಿವ ಕೆಂಪು ಕೋಡಿಯನ್ನು ಸುಮ್ಮನೇ ನೋಡುತ್ತಾ ಹಾಗೇ ಒಮ್ಮೆ ಒದ್ದೆಯಾಗಿಬಿಡೋಣ ಬನ್ನಿ.

(ಮೊನ್ನೆ ಅಧಿಕೃತವೆಂಬಂತೆ ಮೈಸೂರಲ್ಲಿ ಮಳೆಗಾಲ ಶುರುವಾದ ಸಂದರ್ಭದಲ್ಲಿ ಒಂದಷ್ಟು ಖಾಯಂ ಕಾಡುವ ಸಂಗತಿಗಳಿಗೆ ಜೀವ ಬಂತು. ಮಲೆನಾಡ ನಮ್ಮನೆ ಕರೆಯಿತು! ಈ ನಡುವೆ ದಾಖಲಾದ ಬರಹವಿದು)

ಅಮ್ಮಾ ಎಂದರೆ ಏನೋ ಹರುಷವು… ನಮ್ಮ ಬಾಳಿಗೆ ನೀನೇ ದೈವವು… ಅಮ್ಮನ ಬೆಚ್ಚನೆ ಮಡಿಲಿನ ನೆನಪು ಈಗಾಗಲೇ ಆಗಿರಬೇಕಲ್ವಾ? ಬಾಲ್ಯದ ಆರ್ದೃ ನೆನಪುಗಳ ಬುಟ್ಟಿ ಬಿಚ್ಚಿ ನೋಡಿ. ಅಮ್ಮನಿಲ್ಲದೇ ಕುಡಿಯೊಡೆದ ಕನಸುಗಳೊಂದೂ ಸಿಗದು. ಅಮ್ಮನ ನೆರವಿಲ್ಲದೇ ಸಾಧಿಸಿದ ಕೆಲಸಗಳೂ ವಿರಳ.
        
ಅಪ್ಪನ ಪ್ರವಾಹದಂತ ಕೋಪಕ್ಕೆ ತುತ್ತಾಗಿ ಅಳುಮೋರೆ ಮಾಡಿಕೊಂಡು ಮೂಲೆಗೆ ಮೊರೆ ಹೊಕ್ಕಾಗ ರಮಿಸಿದ, ಕಷ್ಟದ ಪರೀಕ್ಷೆ ಎದುರಿಸಿ ಬಂದು ಫೇಲಾಗುವ ಭೀತಿಯಲ್ಲಿದ್ದಾಗ ಧೈರ್ಯ ತುಂಬಿದ, ಮೊದಲ ಸಲ ಬೀಡಿ ಸೇದಿ ಸಿಕ್ಕಿ ಬಿದ್ದಾಗ ಬಾಸುಂಡೆ ಬರುವಂತೆ ಬಾರಿಸಿದರೂ ಅಪ್ಪನ ಬಳಿ ಹೇಳದೇ ತಿಳಿ ಹೇಳಿದ, ಸೈಕಲ್ ಕಲಿಯಲು ಹೋಗಿ ಬಿದ್ದು ಕಾಲಿಗೆ ಭಯಂಕರ ಗಾಯವಾದಾಗ ಮುಲಾಮು ತಿಕ್ಕುತ್ತಾ ಸಮಾಧಾನಿಸಿದ ಎಲ್ಲರ ಪ್ರೀತಿಯ ಅಮ್ಮ ಮನಸಿನಿಂದ ಮರೆಯಾಗುವುದು ಸಾಧ್ಯವೇ? ತಾಯಿಯೆಂಬ ಧೀಃ ಶಕ್ತಿಯ ಮಹತ್ವವೇ ಅಂಥಹುದು.

ಅಂತಹ ಅಮ್ಮನನ್ನು ಮತ್ತೆ ನೆನೆಸಿಕೊಳ್ಳುವ ದಿನ ಬಂದಿದೆ. ಹೌದು. ಮೇ ೧೧ ವಿಶ್ವ ಅಮ್ಮಂದಿರ ದಿನ. ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವನ್ನಾಗಿ ಆಚರಿಸುವುದು ಲೋಕರೂಢಿ. ಈ ಅಭ್ಯಾಸಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಗ್ರೀಕರು. ಗ್ರೀಕ್ ದೇವತೆಯಾದ ರೆಯಾಳನ್ನು ಸಮಸ್ತ ಜಗತ್ತಿನ ಮಾತೆಯೆಂದು ನಂಬಲಾಗಿತ್ತು. ನಂತರ ಇಂಗ್ಲೆಂಡ್‌ನಲ್ಲಿ ಕ್ರಿ.ಶ ೧೬೦೦ ರಿಂದ ಪ್ರತೀ ವರ್ಷದ ಒಂದು ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುವ ಪದ್ಧತಿಗೆ ನಾಂದಿ ಹಾಡಲಾಯಿತು. ದೂರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಆ ದಿನದಂದು ತಾಯಿಯನ್ನು ನೋಡಲು ವಿಶೇಷ ಉಡುಗೊರೆ, ಸಿಹಿತಿಂಡಿಗಳೊಡನೆ ಬರುತ್ತಿದ್ದರೆಂಬುದು ಚರಿತ್ರೆ.

ಆದರೂ ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್ ಊರಿನವಳಾದ ಆಯ್ಯನಾ ಜರ್ವೀಸ್ ಎಂಬಾಕೆ ಅಮ್ಮಂದಿರ ದಿನಕ್ಕೆ ಹೊಸ ಭಾಷ್ಯ ಬರೆಯುವವರೆಗೂ ಅದು ನಿಯಮಿತವಾಗಿ ಆಚರಿಸಲ್ಪಟ್ಟಿರಲೇ ಇಲ್ಲ. ಆಕೆ  ೧೯೦೮ರಲ್ಲಿ ಅಮ್ಮನ ಸವಿ ನೆನಪಿಗಾಗಿ ಚರ್ಚ್ ಒಂದನ್ನು ನಿರ್ಮಿಸಿದಳು. ಆನಂತರ ಫಿಲಡೆಲ್ಫಿಯಾಗೆ ತೆರಳಿದ ಜರ್ವೀಸ್ ಅಲ್ಲಿನ ಪ್ರಮುಖರಿಗೆ ಅಮ್ಮಂದಿರ ದಿನವನ್ನು ಆಚರಿಸಿ ಅದನ್ನು ರಾಷ್ಟ್ರೀಯ ದಿನವೆಂದು ಘೋಷಿಸಲು ವಿನಂತಿಸಿಕೊಂಡಳು. ಈ ವಿನಂತಿಯ ಕರೆಗೆ ಓಗೊಟ್ಟ ಅಧ್ಯಕ್ಷ ವುಡ್ರೋ ವಿಲ್ಷನ್ ಪ್ರತೀ ವರ್ಷದ ಮೇ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವೆಂದು ಘೋಷಿಸಿದರು.

ನಿಧಾನವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಅಮ್ಮಂದಿರ ದಿನ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದವು. ಹೀಗೆ ಚಾಲ್ತಿಗೆ ಬಂದ ಅಮ್ಮಂದಿರ ದಿನಾಚರಣೆ ಅನೇಕ ರಾಷ್ಟ್ರಗಳಲ್ಲಿ ಅದ್ದೂರಿಯಾಗಿಯೇ ಆಚರಿಸಲ್ಪಡುತ್ತದೆ. ಆದರೆ ಅಮ್ಮಂದಿರ ದಿನದ ಆಚರಣೆಯಲ್ಲೂ ಭಾರತ ಬಡರಾಷ್ಟ್ರವೆಂದೇ ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ. 

ತಂದೆ, ತಾಯಂದಿರ ಕೂದಲು ಬೆಳ್ಳಗಾಗುತ್ತಿದ್ದಂತೆ ಬೆಳೆದು ನಿಂತ ಮಗ ಅವರನ್ನು ಕಡೆಗಣಿಸಲು ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯೊಡನೆ ಸೇರಿಕೊಂಡು ಜನ್ಮವಿತ್ತ ತಂದೆ-ತಾಯಿಯರ ಮೇಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾನೆ. ಕಡಿಮೆ ಬೆಲೆಯ ವೃದ್ಧಾಶ್ರಮಗಳಿಗಾಗಿ ಅರಸಿ ಅವರನ್ನು ಸಾಗು ಹಾಕಲು ಪ್ರಯತ್ನಿಸುತ್ತಾರೆ. ಇಂತಹ ದೇಶದಲ್ಲಿ ತಾಯಂದಿರ ದಿನವನ್ನು ನೆನಪಿಟ್ಟುಕೊಂಡು ಆಡಂಬರದಿಂದ ಆಚರಿಸುವುದು ಹೇಗೆ ಹೇಳಿ? ಪರಿಸ್ಥಿತಿ ಬದಲಾಗಬೇಕು. ತಾಯಿಯೆಂಬ ಕಣ್ಣೆದುರಿನ ದೇವತೆಯನ್ನು ಕೊನೆಯವರೆಗೂ ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು ಪ್ರತೀ ಮಕ್ಕಳ ಕರ್ತವ್ಯವಾಗಬೇಕು. ಹೆಂಡತಿ ಬರುವವರೆಗಿನ ಅಕ್ಕರೆಯ ಅಮ್ಮ ಖಾಯಂ ಪ್ರೀತಿಯ ಅಮ್ಮನಾಗೇ ಇರಬೇಕು. ನಮ್ಮನ್ನು ಮಮಕಾರದಿಂದ ಪೋಷಿಸಿದ ಅಮ್ಮನಿಗೆ ವಯಸ್ಸಾದಾಗ ಕೈಲಾಗದವಳೆಂದು ಗಣಿಸದೇ ಕೊನೆಗಾಲದವರೆಗೂ ಪ್ರೀತಿಯನ್ನು ಪರತ್ ಮಾಡುತ್ತಿರಬೇಕು. ಅಕ್ಕರೆಯ ಅವ್ವ ಇಂದಿನ ಬಿಜಿ ಬದುಕಿನ ನಡುವೆ ಕಳೆದು ಹೋಗದಿರಲೆಂಬ ಆಶಯ ನಮ್ಮದಾಗಲಿ. ತಾಯಂದಿರ ದಿನಕ್ಕೆ ಮಹತ್ವ ದೊರಕುವುದು. ಆಗಲೇ… ಏನಂತೀರಾ?        

ಅಟ್ಟದ ಮೇಲೆ ನೇರ
ಬಿದ್ದ ಬಿಸಿಲ ಕೋಲು
ಅಲ್ಲಿನ ಸಂದಿಗೊಂದುಗಳ ನಡುವೆ
ನರಳಿ, ಕೊನೆಗೊಮ್ಮೆ ಹೊರಳಿ
ಅಂಗಳದಲ್ಲಿ ಅರಳುತ್ತಿತ್ತು,
ಸ್ಮಿತೆ ನೆರಳಲ್ಲಿದ್ದಳು!

ಮಾಡಿಗೆ ಅಲ್ಲಲ್ಲಿ ಸಿಕ್ಕಿಸಿದ
ಬೆಳ್ಳಿ ಹಾಳೆಗಳನ್ನು ತೇವವಾಗಿಸಿ
ಅದರ ಇರುವನ್ನೂ
ಸೋಲಿನ ಇತಿಹಾಸವಾಗಿ
ಜೋರುಮಳೆ,
ಸ್ಮಿತೆಯನ್ನು ತೋಯಿಸಲಿಲ್ಲ!

ಕೌದಿಯ ಮೇಲೆರಡು ಕಂಬಳಿ
ಹೊರಗೆ ಚಾಚಿದ ಕುಳಿರ್ಗಾಳಿ
ಅದೆಲ್ಲಿಂದಲೋ ನುಸುಳಿ
ಹಲ್ಲುಗಳ ನಡುವೆ ಕಾದಾಟ
ಮೈಗೆ ಮತ್ತಷ್ಟು ಹೊದಿಕೆಯ ಹಸಿವೆ,
ಸ್ಮಿತೆ ಗಪ್ಪಾಗಿ ನಿದ್ರಿಸಿದ್ದಳು!

ಕೊಲ್ಲಿಯ ಅಲೆಗಳೇ ತಂದು ಕೊಡವಿದ
ಚಿಪ್ಪು ಶಂಖಗಳು !!
ಸ್ಮಿತೆ ಸಮುದ್ರವಾದಳು,
ತೆರೆಯಾದಳು;
ವಿಪರ್ಯಾಸ,
ತೀರಕ್ಕೆ ತಟ್ಟಲೇ ಇಲ್ಲ!!!

 

ನೂರು ಸಾಲುಗಳು ಹೇಳದ್ದನ್ನು ಒಂದು ಚಿತ್ರ ಹೇಳುತ್ತಂತೆ. ಮಾತು ಸವಕಲಾದರೂ ಸತ್ಯ.

ಬ್ಲಾಗ್ ಹೆಡ್ಡರ್ ಗೆ ಬಳಸಿದ ಚಿತ್ರ ಹೇಳುವುದು ಏನೇ ಇರಲಿ ನಾನು ಹೇಳಬೇಕಾದ್ದು ಒಂದಷ್ಟಿದೆ. ನನ್ನ ಮಧುರಾತಿ ಮಧುರ ನೆನಪುಗಳು ಅವಿತು ಕುಳಿತಿವೆ, ಈ ಚಿತ್ರದ ನಡುವಲ್ಲಿ. ಉತ್ತರ ಭಾರತ ಪ್ರವಾಸ ಹೊರಟಿದ್ದ ನಾವು ಕೆಲವು ಪ್ರದೇಶಗಳನ್ನು ನೋಡಿದ್ದೆವು. ಹಲವನ್ನು ನೋಡುವುದರಲ್ಲಿದ್ದೆವು! ಈ ಮಧ್ಯೆ ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರ ಚಿಲ್ಕಾ ದಲ್ಲಿ ಒಂದು ಸುಂದರ ಮುಸ್ಸಂಜೆ ಕಳೆದದ್ದು. ಆಗಲೇ ಮೇಲಿನ ಚಿತ್ರ ಸಿಕ್ಕಿದ್ದು.

ತಲಾ ತೊಂಭತ್ತು ರುಪಾಯಿಗಳಷ್ಟು ತೆತ್ತು, ಒಂಭತ್ತು ಜನರ ನಮ್ಮ ಗುಂಪು ದೋಣಿ ವಿಹಾರ ಸವಿ ಉಣ್ಣುತ್ತಿದ್ದೆವು. ಮೀನುಗಾರನೊಬ್ಬ ತನ್ನ ದೋಣಿಯನ್ನು ತೀರ ತಲುಪಿಸಿ, ದಿನದ ಫಸಲನ್ನು ಗುಡ್ಡೆಹಾಕಿ ಅದರ ಹಂಚಿಕೆಯೊಡನೆ ತನ್ನ ಭವಿಷ್ಯದ ಕವಲುಗಳನ್ನು ಎಣಿಸುತ್ತಿರುವಂತೆ ಕಂಡ. ಅಲ್ಲಿನ ಮತ್ಸ್ಯಗಾರರ ದುರ್ದರ ಬದುಕಿನ ಕುರಿತು ನಮ್ಮ ದೋಣಿ ನಡೆಸುವವ ವಿವರಿಸಲು ಪ್ರಾರಂಭಿಸಿದ. ದೂರದಲ್ಲಿ ಭಾಸ್ಕರನೂ ದಿನದ ಡ್ಯೂಟಿ ಮುಗಿಸಿ ಸಾಗರದ ಸನ್ನಿಧಿ ಸೇರುತ್ತಿದ್ದ. ಆತ ಕೊನೆಯದಾಗಿ ಬೀರಿದ ಬೆಳಕು ಮೀನುಗಾರನಿಗೆ ಮುಟ್ಟುತ್ತಿರಲಿಲ್ಲ!

ಮುಂದೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಿಮಗೆ…!!!

ಅದ್ಯಾಕೋ ಅಂದು ತಟ್ಟನೇ ಬಿ.ಎಂ.ಶ್ರೀ ಯವರ ಕರುಣಾಳು ಬಾ ಬೆಳಕೇ ನೆನಪಾಗಿ ಬಿಟ್ಟಿತು. ಅದು ಇಂದು ಮತ್ತೆ ನೆನಪಾಯಿತು!

 

ಪ್ರೀತಿಯ ತಂಗಿಗೆ,
           ನೆನಪಿದೆಯಾ ನಿನಗೆ? ಬೆಳ್ಳಂಬೆಳಗ್ಗೆ ಎದ್ದು, ಓದುವ ನೆಪವನ್ನಿಡಿದು, ಬಚ್ಚಲಿನ ಒಲೆಗೆ ರಾತ್ರಿಯೇ ಅಮ್ಮ ಹಾಕಿದ ಬೆಂಕಿಯೆದುರು ನಾವಿಬ್ಬರೂ ಒಕ್ಕೂರಲಾಗಿ ಕುಳಿತು ತೂಕಡಿಸಿದ ನೆನಪು, ಅಮ್ಮ ಕೊಡುವ ಹಬೆಯಾಡುವ ಕಾಫಿ ಬರುವವರೆಗೆ ಒತ್ತರಿಸಿ ಬಂದ ನಿದ್ದೆಗೆ ಬಲವಂತದ ತಡೆಯೊಡ್ಡಿ ಕಾಫಿ ಸೇವೆಯ ನಂತರ ಪೂರ್ಣ ನಿದ್ದೆಗೆ ಶರಣಾದ ನೆನಪು, ನಿದ್ರಿಸುತ್ತಿದ್ದುದ್ದನ್ನು ನೋಡಿ ಅಮ್ಮ ಕೊಟ್ಟ ಧರ್ಮದೇಟಿಗೆ ತಿಂಡಿ ಬಿಟ್ಟು ಮುಷ್ಕರ ಹೂಡಿದ್ದ ನೆನಪು, ಅಜ್ಜಿ ರಮಿಸಿ ಹೇಳಿದಾಗಲೂ ಜಗ್ಗದೇ, ಮತ್ತದೇ  ಅಮ್ಮನ ಪೀತಿ ಸೂಸುವ ಒಂದೇ ಮಾತಿಗೆ ಮರುಳಾಗಿ ಒಟ್ಟೊಟ್ಟಿಗೆ ಎಂಟೆಂಟು ದೋಸೆಗಳನ್ನು ಸದಾ ಡಬ್ಬದಲ್ಲಿರುತ್ತಿದ್ದ ಚಟ್ನಿ ಪುಡಿಯೊಂದಿಗೆ ಚಪ್ಪರಿಸಿ ತಿಂದ ನೆನಪು, ನಮಗಿಂತ ಬೇಗ ಎದ್ದು ಕೊಟ್ಟಿಗೆ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಅಪ್ಪನಿಗೆ ಅಲ್ಲೇ ಹೋಗಿ ರಗಳೆ ಕೊಡುತ್ತಿದ್ದ ನೆನಪು, ಅಪ್ಪ ಹಾಲು ಕರೆಯುವಾಗ ಉಮೇದಿನಿಂದ ನಾವೂ ಹಾಲು ಕರೆಯಲು ಹೋಗಿ ಗೌರಿಯು ಬಳಿ ಒದೆ ತಿಂದ ನೆನಪು,(ಇದೇ ಗೌರಿ ಮಳೆಗಾಲದಲ್ಲೊಂದು ದಿನ ರಸ್ತೆ ಬದಿಯ ಗಟಾರಕ್ಕೆ ಬಿದ್ದು ಸತ್ತಾಗ ನೀನು ವಾರಗಟ್ಟಲೇ ಮರುಗಿದ್ದು ನನಗಿನ್ನೂ ನೆನಪಿದೆ.) ಓರಗೆಯ ಗೆಳೆಯರೊಡನೆ ಬಣ್ಣದ ಕೊಡೆಯನ್ಹಿಡಿದು ಸುರಿಯುವ ಜಿಟಿ ಜಿಟಿ ಮಳೆಯಲ್ಲಿ ಖುಷಿ ಖುಷಿಯಿಂದ ಶಾಲೆಗೆ ನಡೆಯುತ್ತಿದ್ದ ನೆನಪು, ದಾರಿಯಲ್ಲಿ ಬೆಟ್ಟದಿಂದ ಹರಿದು ಬರುವ ಪುಟ್ಟ ಪುಟ್ಟ ಝರಿಗಳನ್ನು ಕಾಣುತ್ತಾ ಸಂತೋಷ ಪಟ್ಟ ನೆನಪು, ರಸ್ತೆಯ ಇಕ್ಕೆಲಗಳಲ್ಲಿ ಕೆಂಪಾದ ಕೋಡಿ ನೀರು ಭಯಂಕರ ವೇಗದಿಂದ ಕಸ ಕಡ್ಡಿಗಳನ್ನು ಸೇರಿಸಿಕೊಂಡು ಹರಿಯುವುದನ್ನು ಭಯಭೀತರಾಗಿ ನೋಡುತ್ತಾ ನಿಂತ ನೆನಪು, ಬೀಸುವ ಗಾಳಿಗೆ ಆಗಾಗ ಕೊಡೆ ಉಲ್ಟಾ ಆದಾಗ ಉಕ್ಕಿ ಬಂದ ನಗುವನ್ನು ಇಂಚೂ ಕೂಡಾ ಹಿಡಿದಿಡದೇ ಪೂರ್ತಿಯಾಗಿ ಚೆಲ್ಲಿದ ನೆನಪು, ಶಾಲೆಯಲ್ಲಿ ಉದ್ದ ಬೆಳೆದ ಉಗುರಿನೊಂದಿಗೆ ಪ್ರಾರ್ಥನೆಗೆ ನಿಂತಾಗ ಉಗುರು ನೋಡುವ ಪದ್ಧತಿಗೆ ಹೆದರಿ ಹಲ್ಲಿನಿಂದ ಕಚ್ಚಿ ಕಚ್ಚಿ ಅದನ್ನು ತೆಗೆದ ನೆನಪು, ಪ್ರತಿ ಬುಧವಾರ ಬಣ್ಣದ ಬಟ್ಟೆ ಹಾಕಿಕೊಳ್ಳಲು ಸಂಭ್ರಮ ಪಡುತ್ತಿದ್ದ ನೆನಪು, ನಿತ್ಯ ಪಂಚಾಂಗ ಹೇಳುವಲ್ಲಿ ಎಡವಿ ಬಸ್ಕಿ ಹೊಡೆದ ನೆನಪು, ಶಾಲೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ಕುಳಿತುಕೊಳ್ಳಬೇಕಾದ್ದರಿಂದ ಒಟ್ಟಿಗಿರಲಾಗದೆಂದು ಚಡಪಡಿಸಿದ ನೆನಪು, ಆಗಾಗ ಉಚ್ಚೆ ಹೊಯ್ಯುವ, ನೀರು ಕುಡಿಯುವ ಪಿಳ್ಳೆ ನೆಪವೊಡ್ಡಿ ಕ್ಲಾಸಿನಿಂದ ಹೊರಬಂದು ಇಬ್ಬರೂ ಸೇರದೆ ಬಹು ಕಾಲವಾಯಿತೇನೋ ಎಂಬಂತೆ ಕುಳಿತು ಮಾತನಾಡುತ್ತಿದ್ದಾಗ ಪಿ.ಟಿ.ಮಾಸ್ತರರು ಕಂಡು ಬೈದರೂ ಎಂಥಾ ಅಣ್ಣ ತಂಗಿಯಪ್ಪಾ ಎಂದಾಗ ಗರ್ವ ಪಟ್ಟ ನೆನಪು, ಸಂಜೆ ಆಟಕ್ಕೆ ಬಿಡುವುದನ್ನೇ ಕಾಯ್ದು ಕೊಂಡು ಹುಮ್ಮಸ್ಸಿನಿಂದ ಮುಂದಿನ ಮೈದಾನಕ್ಕೆ ಓಡಿದ ನೆನಪು, ದೊಡ್ಡ ಆಳ್ತನದ ನಮ್ಮನೆ ಕೆಲಸದ ಈಶನ ಮಗ ವೆಂಕ್ಟ ನನ್ನೆದುರು ಕಬಡ್ಡಿಗೆ ನಿಂತಾಗ ಥರಗುಟ್ಟಿದ ನೆನಪು, ಬದಿಯಲ್ಲಿ ನಿಂತು ನೀನು ಚಪ್ಪಾಳೆ ತಟ್ಟುತ್ತಾ ಕುಪ್ಪಳಿಸುತ್ತಿದ್ದ ನೆನಪು, ಲಕ್ಷಕ್ಕೆಷ್ಟು ಸೊನ್ನೆ ಎಂಬುದನ್ನೂ ಹೇಳಲಾಗದೇ ಮಾಲಿನಿ ಅಕ್ಕೋರರ ಗಾಳಿ ಕೋಲಿನಿಂದ ಪೆಟ್ಟು ತಿಂದು ನಾಲ್ಕಾರು ಬರೆ ಬಿದ್ದ ನನ್ನ ಕಾಲುಗಳನ್ನು ಕಂಡು ನಿನ್ನ ಕಣ್ಣಲ್ಲೂ ನೀರು ಚಿಮ್ಮಿದ ನೆನಪು, ಶಾಲೆ ಬಿಟ್ಟೊಡನೆಯೇ ಕೌಳಿ ಹಣ್ಣು ತಿನ್ನುವ ಆಸೆಯನ್ನು ಹೊತ್ತು ಕೌಳಿ ಗುಡ್ಡಕ್ಕೆ ಓಡಿದ ನೆನಪು, ಮೈಯೆಲ್ಲಾ ತರಚಿಕೊಂಡು ಮನೆಗೆ ಮರಳಿ ಬೈಸಿಕೊಂಡ ನೆನಪು, ಸಂಜೆ ಅಮ್ಮ ಮಾಡಿ ಕೊಡುತಿದ್ದ ಅವಲಕ್ಕಿ-ಮಜ್ಜಿಗೆಗೆ ಹಾತೊರೆಯುತ್ತಿದ್ದ ನೆನಪು, ಅದರೊಡನೆ ಅಪ್ಪ ಪೇಟೆಯಿಂದ ತಂದ ಚಿಪ್ಸ್ ಬೆರೆಸಿ ತಿಂದ ನೆನಪು, ಚೌತಿ ಹಬ್ಬದ ಸಮಯದಲ್ಲಿ ಮಾಡಿಟ್ಟಿರುತ್ತಿದ್ದ ಪಂಚಕಜ್ಜಾಯಕ್ಕೆ ಕಿತ್ತಾಡುತ್ತಿದ್ದ ನೆನಪು, ಸಂಜೆ ಮೇಲಿನ ಕೇರಿಯ ಸುಬ್ಬುವಿನ ಮನೆಗೆ ವಾರಿಗೆಯ ಮಕ್ಕಳೊಟ್ಟಿಗೆ ಹೋಗಿ ಕಂಬದಾಟ ಆಡುತ್ತಿದ್ದ ನೆನಪು, ಅಲ್ಲೇ ಆಟವಾಡುತ್ತಾ ಸಂಜೆಯಾಗಿ ಮನೆಗೆ ವಾಪಸ್ ಹಿಂದಿರುಗಲು ಭಯ ಪಡುತ್ತಿದ್ದ ನೆನಪು, ಅಪ್ಪ ರಾತ್ರಿ ಕೆಲಸ ಮುಗಿಸಿ ಬರುವಾಗ ನಮ್ಮನ್ನು ಬೈದುಕೊಂಡು ಕರೆತರುತ್ತಿದ್ದ ನೆನಪು, ಅಜ್ಜಿ ರಾತ್ರಿ ಒಪ್ಪತ್ತಿನ ಹೆಸರಲ್ಲಿ ತಿಂಡಿ ತಿನ್ನುತ್ತಿದ್ದನ್ನು ಕಂಡು ನಾವೂ ಊಟದ ಬದಲು ತಿಂಡಿಗೇ ಆಸೆ ಪಡುತ್ತಿದ್ದ ನೆನಪು, ರಾತ್ರಿ ಕೈಕಾಲು ತೊಳೆಯಲು ತೋಟದ ದಿಡ್ಡಿಯಲ್ಲಿದ್ದ ಬಚ್ಚಲಿಗೆ ಭೂತದ ಭಯದಿಂದ ಹೋಗಲು ಹಿಂಜರಿಯುತ್ತಿದ್ದ ನೆನಪು, ಆದರೂ ರಾತ್ರಿ ಅಜ್ಜನ ಬಳಿ ದೆವ್ವ-ಭೂತದ ಕಥೆ ಹೇಳಲು ಪಟ್ಟು ಹಿಡಿಯುತ್ತಿದ್ದ ನೆನಪು, ಅಪ್ಪ ಹೊಸದಾಗಿ ಟಿ.ವಿ ತಂದಾಗ ಅಜ್ಜ ಕಥೆ ಹೇಳುತ್ತಿದ್ದ ರೂಢಿ ತಪ್ಪಿ ಹೋಗಿದ್ದಕ್ಕೆ ಮರುಗಿದ ನೆನಪು, ಮನೆಯ ಮೇಲಿನ ಸೂರಿನ ಕೆಳಗೆ ಮಲಗಿದರೆ ರಾತ್ರಿ ಕೆಟ್ಟ ಕನಸು ಬೀಳುತ್ತದೆ ಎಂಬ ಅಜ್ಜನ ಮಾತನ್ನು ಪ್ರಮಾಣೀಕರಿಸಿಕೊಳ್ಳಲು ಹೋಗಿ ಅಪ್ಪನ ಬಳಿ ಲತ್ತೆ ತಿಂದ ನೆನಪು, ಎರಡೆರಡು ಕಂಬಳಿಯ ಕೆಳಗೆ ಚಾದರವೊಂದನ್ನು ಸೇರಿಸಿ ಹೊದ್ದು ಬೆಚ್ಚಗೆ ಮಲಗಿ ಮಗ್ಗುಲು ಬದಲಿಸುತ್ತಿದ್ದ ನೆನಪು… …
 ಅದೆಷ್ಟು ಸುಮಧುರವಲ್ಲವಾ ಬಾಲ್ಯದ ನೆನಪುಗಳು? ಬಹುಷಃ ನೀನು ಕೂಡ ಇವೆಲ್ಲವನ್ನೂ ನೆನೆಸಿಕೊಳ್ಳುತ್ತಿರುವೆ ಎಂದು ಕೊಳ್ಳುವೆ ಅಥವಾ ಬೆಂಗಳೂರಿನ ಗಡಿಬಿಡಿಯ ಬದುಕಿನಲ್ಲಿ, ಅಟ್ಟ ಸೇರಿದ ಜಾಡಿಯೊಳಗೆ ಈ ಸವಿ ನೆನಪುಗಳನ್ನೆಲ್ಲಾ ಬಾಯಿಕಟ್ಟಿ ಇಟ್ಟಿರುವೆಯೋ? ಎಳೆದಷ್ಟು ಬಿಚ್ಚಿಕೊಳ್ಳುವ ರೇಷ್ಮೆ ನೂಲುಗಳಲ್ವಾ ಅವು?  ಇಂದಿನ ಕಾನ್ವೆಂಟ್-ಕಾಂಕ್ರೀಟ್ ಸಂಸ್ಕ್ರತಿಯ ಮಕ್ಕಳನ್ನು ನೋಡಿದರೆ ದುರದೃಷ್ಟಶಾಲಿಗಳೆನಿಸುತ್ತದೆ. ನಿನ್ನ ಮಗಳೂ ಇದಕ್ಕೆ ಹೊರತಾಗಿರಲಾರಳು. ವರ್ಷಕ್ಕೊಮ್ಮೆಯಾದರೂ ನೀನವಳನ್ನು ತವರು ಮನೆಗೆ ಕರೆದುಕೊಂಡು ಬರುವುದಿಲ್ಲವಲ್ಲಾ ಅದಕ್ಕೆ ಹೇಳಿದೆ. ಇರಲಿ ಬರುವ ಮೇನಲ್ಲಾದರೂ ಮನಸ್ಸು ಮಾಡು. ನಿನ್ನ ಪತಿರಾಯರು ಹೇಗೂ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ. ಮಗಳನ್ನಾದರೂ ಕಳಿಸು. ದಾರಿ ಕಾಯುತ್ತಿರುವೆ.                        
                                  ಪ್ರೀತಿಯಿಂದ ಅಣ್ಣ

(ನನ್ನವೊಂದಿಷ್ಟು ನೆನಪುಗಳಿದ್ದವು. ಅವನ್ನೆಲ್ಲಾ ಕೂಡಿಸಬೇಕೆನಿಸಿತು. ಅದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೀಗೆ ಒಂದೇ ಪಟ್ಟಿಗೆ ಅವನ್ನು ಜೋಡಿಸುವ ಯತ್ನ ಮಾಡಿದೆ. ಹುಟ್ಟಿದ್ದು ಮೇಲಿನ ಬರಹ. ಹ್ಞಾಂ ! ನಿಮಗೆ ಸಮಯವಿದ್ದಲ್ಲಿ ನೆನಪು ಪದ ಪ್ರಯೋಗ ಎಷ್ಟು ಬಾರಿ ಆಗಿದೆ ಎಂದು ಎಣಿಸಿಕೊಳ್ಳಬಹುದು!)
                                             

ಧೋ ಎಂದು ಪೃಥ್ವಿಯನ್ನೇ ಕಬಳಿಸುವೋಪಾದಿಯಲ್ಲಿ ವರುಣನ ಆರ್ಭಟ. ದಟ್ಟ ಕಾಡು. ಹೆಚ್ಚಾಗಿ ಅದು ನಮ್ಮೂರು. ನಂಗೆ ಆ ಪ್ರದೇಶದ ಇಂಚಿಂಚೂ ಗೊತ್ತೆಂಬ ಹೆಗ್ಗಳಿಕೆಯಿದೆ. ಅಲ್ಲಿ ಏರ್ಪಾಟಾಗಿದ್ದು ರಸಪ್ರಶ್ನೆ ಸ್ಪರ್ಧೆ! ಪ್ರಪಂಚದ ಮೂಲೆ ಮೂಲೆಯಿಂದ ವಿವಿಧ ಹಂತಗಳಲ್ಲಿ ವಿಜಯಿಗಳಾಗಿ ಇಲ್ಲಿ ಆಗಮಿಸಿದ್ದಾರೆ ಸ್ಪರ್ಧಿಗಳು. ಆದರೆ ಅಚ್ಚರಿಯೆಂದರೆ ಹಾಗೆ ಬಂದವರೆಲ್ಲರ ಕೈನಲ್ಲೂ ಮಾರುದ್ದದ್ದ ಹಗ್ಗ! ಬುಡ ಸ್ಪರ್ಧಿಗಳ ಕೈನಲ್ಲಾದರೆ, ತುದಿ ಎಮ್ಮೆ, ಕೋಣಗಳ ಕತ್ತಿನಲ್ಲಿ. ಅವುಗಳೆಲ್ಲವುಗಳ ಕೋಡು ಮಾತ್ರ ಒಂದೇ ಥರ! ದೊಡ್ಡದು..ಅವು ಯಾಕೋ ಗೊತ್ತಿಲ್ಲ.ಸ್ಪರ್ಧೆ ಶುರುವಾಗೇ ಬಿಟ್ಟಿತು. ಪ್ರಶ್ನೆ ಕೇಳುತ್ತಿದ್ದವ ಉದ್ದನೆಯ ಕಿರೀಟ, ನೀಲಿ ನಿಲುವಂಗಿ ಧರಿಸಿದ್ದ. ಅವ ನಮ್ಮೂರಿನವನಂತೂ ಅಲ್ಲ. ಅಂತಹ ಮಳೆ ಹೊಯ್ಯುತ್ತಿದ್ದರೂ ಯಾರ ಮೈಯೂ ನೆನೆಯದಂತೆ ವ್ಯವಸ್ಥೆ ಮಾಡಿದ್ದು ಅವನೇ. ಹಾಗಂತ ಮೇಗಡೆ ಯಾವ ಸೂರಿನ ಸೃಷ್ಟಿಯೂ ಆಗಿಲ್ಲ. ಆದರೂ ಯಾರಿಗೂ ಈ ವ್ಯವಸ್ಥೆ ವಿಶೇಷವಿನಿಸುತ್ತಿಲ್ಲ. ಉಪಸ್ಥಿತರಿದ್ದ ನೂರೆಂಟು ಸ್ಪರ್ಧಿಗಳು, ಜೊತೆಗೆ ಅವರು ತಂದಿದ್ದ ಕೋಣ, ಎಮ್ಮೆಗಳು ಅಲ್ಲದೇ ನಮ್ಮೂರಿನ ಬಹುತೇಕ ಎಲ್ಲಾ ಹಿರಿ ಕಿರಿ ತಲೆಗಳೂ ಕಾತರರಾಗಿ ಸುತ್ತ ನೆರೆದಿದ್ದಾರೆ. ಮೂರು-ನಾಲ್ಕು ಹಂತವನ್ನು ದಾಟಿ ಸ್ಪರ್ಧೆ ಮುಂದುವರೆಯುತ್ತಿತ್ತು. ಸುಮ್ಮನೇ ನಿಂತಿದ್ದ ಕೋಣವೊಂದು ಚಡಪಡಿಸಿತು. ಇದ್ದಕ್ಕಿದ್ದಂತೆ ಎಲ್ಲಾ ಎಮ್ಮೆ, ಕೋಣಗಳಿಗೂ ಇದು ಸಾಂಕ್ರಾಮಿಕವಾಯಿತು. ಇದ್ದಕ್ಕಿಂದಂತೆ ಎಲ್ಲವೂ ಮಾಲೀಕರ ಕೈನಿಂದ ತಪ್ಪಿಸಿಕೊಂಡು ಯದ್ವಾ ತದ್ವಾ ಓಡತೊಡಗಿದವು. ಹದಿನೆಂಟೋ ಇಪ್ಪತ್ತೋ ಜನರ ಮೈಮೇಲೆ ಎರಗಿದ ಅವುಗಳು ಕೆಂಬಣ್ಣ ಚೆಲ್ಲಿದವು. ಸುತ್ತ ನಿಂತವರಿಗೆಲ್ಲಾ ಒಂದು ಕ್ಷಣದ ಗಾಬರಿಗೆ ಮಾತ್ರ ಅವಕಾಶವಿದ್ದುದು. ಪರಿಸ್ಥಿತಿಯ ಅರಿವು ಮುಟ್ಟಿದ ಅವರುಗಳೆಲ್ಲಾ ಅಂಡಿಗೆ ಕಾಲು ಹಚ್ಚಿ ಕೋಣ, ಎಮ್ಮೆಗಳಿಗೆ ಸೆಡ್ಡು ಹೊಡೆಯುವರಂತೆ ಓಡ ಹತ್ತಿದರು. ಸಿಕ್ಕ ಸಿಕ್ಕಲ್ಲಿ ಅವಿತು ಕೂತರು. ಅಂತಹ ಸಂದರ್ಭದಲ್ಲೂ ನಾನು ಗಮನಿಸಿದ್ದೇನೆಂದರೆ ಎತ್ತು, ಕೋಣಗಳಿಗೆ ನಿರ್ದೇಶಿಸುತ್ತಿದವ ಕಿರೀಟ, ನೀಲಿ ನಿಲುವಂಗಿ ತೊಟ್ಟವ. ಆದರೆ ಆ ಕುರಿತು ನಿಂತು ಯೋಚಿಸಲು ಸಮಯವನ್ನು ವೆಚ್ಚ ಮಾಡುವುದು ಮೂರ್ಖತನವೆಂದೆನಿಸಿ ಓಟ ಕಿತ್ತಿದ್ದೆ.

ಒಬ್ಬೊಬ್ಬರದೇ ಸ್ವರ ಭೂಮಿಯ ಸಮತಟ್ಟಿನಿಂದ ಉಪಕ್ರಮಿಸಿ, ಮರಗಿಡಗಳನ್ನು ದಾಟಿ, ಮೋಡಗಳನ್ನು ಹಾದು ಅನತಿ ದೂರದಲ್ಲಿ ಪರಿಸಮಾಪ್ತಿಯಾಗುತ್ತಿತ್ತು! ನಾನು ನಿಶ್ಚಯಿಸಿಕೊಂಡಂತೆ, ನನಗೆ ಮೊದಲೇ ತಿಳಿದ್ದಿದ್ದ, ಕೋಣ, ಎಮ್ಮೆಗಳ್ಯಾವುದೂ ಬರಲಾಗದ ಎತ್ತರದ ಧರೆಯ ಇಕ್ಕಟ್ಟಿನ ಸ್ಥಳದಲ್ಲಿ ನಾಜೂಕಾಗಿ ನಿಂತಿದ್ದೆ. ಅಲ್ಲಿಗೆ ಮತ್ತೊಬ್ಬ ಮನುಷ್ಯನ ಆಗಮನವೂ ಅಪಾಯಕಾರಿಯಾಗಿತ್ತು. ನಿಂತಿದ್ದ ನೆಲವೇ ಕುಸಿಯುವ ಭಯವಿತ್ತು. ಸಮಯ ಸರಿದಂತೆ ಆಕಾಶದೆತ್ತರದ ಕೂಗುಗಳು ಕಡಿಮೆಯಾದವು. ಅಲ್ಲಲ್ಲಿ ಕೊನೆಯ ನರಳಿಕೆಗಳು ಮಾತ್ರ ಕಿವಿ ಮುಟ್ಟುತ್ತಿದ್ದವು. ನಿಧಾನವಾಗಿ ಅವು ಕೂಡ ನಿಂತು ಹೋದವು.

ನಾನು ಭದ್ರವೆಂಬ ಭಾವ ನನಗಿತ್ತು. ಅಷ್ಟರಲ್ಲಿ ಕಾಣಿಸಿಕೊಂಡವನು ಅದೇ ಕಿರೀಟ, ನೀಲಿ ನಿಲುವಂಗಿ ತೊಟ್ಟವನು. ಅರೆ! ಅವನಿಗೆ ಕಿರೀಟವಿದ್ದಲ್ಲೀಗ ಕೋಡು ಕಾಣಿಸುತ್ತಿದೆ!! ಖಂಡಿತವಾಗಿ ಆತ ಬರುತ್ತಿರುವುದು ನನ್ನನ್ನೇ ಇರಿಯಲು ಎಂದು ಥರಗುಟ್ಟಿದೆ. ನಿಂತ ಜಾಗದಿಂದ ಒಂದೇ ಉಸುರಿಗೆ ಬದುಕಿದರೆ ಬದುಕಲಿ ಎಂದುಕೊಂಡು ಕಣ್ಮುಚ್ಚಿ ಅಲ್ಲಿಂದ ಹಾರಿದವನು ಹೋಗಿ ಬಿದ್ದಿದ್ದು ಕೊಟ್ಟಿಗೆಗೆ! ಆದರೆ ಅಲ್ಲಿ ಎಮ್ಮೆ ಕೋಣಗಳಿರಲಿಲ್ಲ. ಬಿಳಿ ಬಣ್ಣದಲ್ಲಿ ಮಿಂದೆದ್ದು ಬಂದಂತಿದ್ದ ಸಾವಿರಾರು ಹಸುಗಳು!! ಅವುಗಳೆಲ್ಲದರ ಬಣ್ಣವೂ ಬಿಳಿಯೇ!!! ಬಿದ್ದಲ್ಲೇ ಮಲಗಿದೆ. ಅಲ್ಲೇ ನಿದ್ದೆ ಹತ್ತಿತು.

ಮರುದಿನ ಶಾಲೆಗೆ ಹೊರಟಿದ್ದೆ. ಇವತ್ತು ಮಳೆಯಿರಲಿಲ್ಲ, ಹಿಮ ಸುರಿಯುತ್ತಿತ್ತು. ದಾರಿಯಲ್ಲೊಂದು ಭೀಮಾಕಾರದ ಲಾರಿ, ಎದುರಿಗೆ ನವ ಜೋಡಿಯಿರುವ ಕಾರನ್ನು ಅಟ್ಟಿಸಿ ನಡೆದಂತಿತ್ತು. ಒಂದರೆಕ್ಷಣ ತಬ್ಬಿಬ್ಬಾದೆ. ಆತ ಅವನೇ? ಹೌದು. ಹೌದು ಅದು ಆತನೇ! ಲಾರಿಯನ್ನು ಓಡಿಸುತ್ತಿದ್ದವ ಕಿರೀಟ, ನೀಲಿ ನಿಲುವಂಗಿ ತೊಟ್ಟಿದ್ದ!! ತಕ್ಷಣ ಕಾರಿನಲ್ಲಿದ್ದವರಿಗೆ ಕೇಳಿಸಲಿ ಎಂದುಕೊಂಡು ಹೋ ಎಂದು ಅರಚಿದೆ. ಅಮ್ಮ ಬಂದು ಶಾಲೆಗೆ ಹೊತ್ತಾಯಿತು, ಹೋಗಲ್ವಾ? ಎಂದು ಗದರಿದಳು !!!

(ಕನಸುಗಳಿಗೆ ಬುಡವಿಲ್ಲ, ತುದಿಯಿಲ್ಲ, ಅರ್ಥ ಸಂಭಂಧವಿಲ್ಲ ಅಥವಾ ಎಲ್ಲವೂ ಇವೆ. ಬಿದ್ದ ಕನಸುಗಳಲ್ಲಿ ಬಹಳಷ್ಟು ಮರೆತು ಹೋಗುವುದೂ ನಿಜ. ಹೀಗೆ ಇತ್ತೀಚೆಗೆ ನನಗೆ ಬಿದ್ದ ಕನಸನ್ನು ಯಥಾವತ್ತಾಗಿ ಬ್ಲಾಗಿಗೆ ತುರುಕುತ್ತಿದ್ದೇನೆ, ಹಾಗೇ ಓದಿಕೊಳ್ಳಿ) ಲೇಖನದ ಕಟ್ಟ ಕೊನೆಯ ಸಾಲನ್ನು ಹೊರತುಪಡಿಸಿ ಉಳಿದವೆಲ್ಲಾ ಸತ್ಯ(?)
 

ಇತ್ತ ಚಿತ್ತ ಹಾಯಿಸಿ…

ಗಿಜಿಗುಡುವ ಮಾರ್ಕೇಟ್ ರಸ್ತೆ

ಮೊನ್ನೆಯ ಮಳೆಯಿಂದಾದ ಕೆಸರು ಕುಂಡಗಳು

ಅನಾಥವಾಗಿ ಬಿದ್ದ ಕೊಳೆತ ಕೋಸು

ಉರುಳುರುಳಿ ಬಂದ ನಿಂಬೆ ಹಣ್ಣು

ದೇಖರಿಕೆಯಿಲ್ಲದೇ ನಾರುವ

ಕಾರ್ಪೋರೇಶನ್ ತೊಟ್ಟಿ

ಪ್ಲಾಸ್ಟಿಕ್ ಧೂಮಕ್ಕೆ ತಲೆಯಾನಿಸುವ ಮತ್ತರು

ಚಿಂತೆಯೇಕೋ ಗೆಳೆಯಾ..? ಎಂಬ ಸಮಾಧಾನಗಳು

ರಪ್ಪಡಕ ಕೆಂಪು ಮೆತ್ತಿದ ಸ್ತಂಭ

ತೂತು ಬಿದ್ದ ನಾಲ್ಕಾರು ಪತಾಕೆಗಳು

ಬುಡದಲ್ಲಿ ಒಣಗಿದ ಮೈಸೂರ ಮಲ್ಲಿಗೆಯ ಹಾರ

ಅಲ್ಲಲ್ಲೇ ಕಕ್ಕಕ್ಕೆ ಕುಳಿತ ಸಿಂಬಳ ಸುರುಕ ಕೂಸುಗಳು

ಅವರ ಚೊಣ್ಣದಲ್ಲಿ ಬಣ್ಣಗಳ ದಿಬ್ಬಣ

ಮರೆಮಾಚಲು ಸಮರ್ಥವಾದ ಸೆರಗಿಲ್ಲದೇ

ಉಬ್ಬಿ ಕಾಣುವ ಕಡು ಕಪ್ಪು ಚೆಲುವೆಯ ಸ್ತನ

ರೆಪ್ಪೆಯಾಡಿಸದೇ ದೃಷ್ಟಿ ನೆಟ್ಟ ಪುಂಡರು

ನಿನ್ನದೆನ್ನಲು ತನುವೂ ಇಲ್ಲ, ಮನವೂ ಇಲ್ಲ

ಕಂಗಳಲ್ಲಿನ ಕನಸುಗಳೆಲ್ಲಾ ಸತ್ತು ತೇಲುತ್ತಿವೆ!

ದೂರದಲ್ಲೆಲ್ಲೋ ಚುನಾವಣಾ ಭಾಷಣ

ಮೇರಾ ಭಾರತ್ ಮಹಾನ್…

ಮೈಕ್ ಒದರುತ್ತಿದೆ ಬದಿಯಲ್ಲಿ…………

ಟುರುಗುಟ್ಟುವ ಜಾತ್ರೆಯ ಉದ್ದನೆಯ ಪಿಸ್ತೂಲುಗಳು!

ಒಂದೇ ಮೊಳೆಯಲ್ಲಿ ತೂಗುವ, ಮುರಿದ ಫ್ರೇಮಿನ

ಒಡೆದ ಗಾಜಿನ, ಫೋಟೋದಡಿ ನಸು ನಗುವ ಗಾಂಧಿ

ಇತ್ತ ಚಿತ್ತ ಹಾಯಿಸಿ,

ಪಟ್ಟ ತೊಟ್ಟವರೇ…

ಹೇವರವ ಹೈರಾಣಾಗಿಸಿ

ಕೃಪೆ ತೋರಿರಿ…

ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸಬಹ್ಮದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪ್ಮಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ, ಸುಮ್ಮನಾಗುತ್ತನೆ!

ಸತ್ಯವಾಗಿ ಹೇಳುತ್ತೇನೆ, ನೀನಂದು ನನ್ನ ಮರೆತೆಯೆಂದು ತಿಳಿದ ಕ್ಷಣ ನಾನು ಭೋರ್ಗರೆವ ನದಿಯಾಗಲಿಲ್ಲ. ಜಿಟಿ ಜಿಟಿ ಸುರಿಯುವ ಮಳೆಯಾಗಲಿಲ್ಲ. ತಣ್ಣಗಿರುವ ಧರಣಿಯ ಸ್ಥಿತಿಗೆ ಹೋಲಿಸಬಹುದಿತ್ತಷ್ಟೇ. ನೀನು ಕೋಪಿಸಿಕೊಂಡರೂ ಇನ್ನು ಚಿಂತಿಲ್ಲ! ನಾನು ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವವನೇ… ನಿನ್ನೊಡನಿದ್ದಾಗ ನಾನು ಕೆಲವು ಕನಸುಗಳ ಕಟ್ಟಿದ್ದೆ, ಈಗಿಲ್ಲವೇ ಎಂದು ವ್ಯಂಗ್ಯವಾಡುವ ಅವಕಾಶ ನಿನಗಿಲ್ಲ. ಯಾಕೆಂದರೆ ಅಂದು ಕೆಲವಿದ್ದ ಕನಸುಗಳೀಗ ಹಲವಾಗಿವೆ!

ನಾನು ನಿನ್ನನ್ಮಡಿಗೆ, ನಡೆಗೆ, ಚೆಲುವಿಗಿಂತ ಹೆಚ್ಚಾಗಿ ಮನಸೋತದ್ದು ಆ ದಪ್ಪನೆಯ ಪುಸ್ತಕದಲ್ಲಿ ನೀನು ಜತನದಿಂದ ಎತ್ತಿಟ್ಟುಕೊಂಡು, ಮರಿ ಹಾಕುತ್ತದೆಂದು ಕಾಯ್ದಿದ್ದ ನವಿಲುಗರಿಗೆ! ಆ ಕಾಯುವಿಕೆಯಲ್ಲಿನ ಗಾಢತೆಗೆ. ಅದು ಮರಿ ಹಾಕಿತೋ ಇಲ್ಲವೋ ಕಾಣೆ, ಆದರೆ ನಿನ್ನ ಆ ಕಾಳಜಿ ನನ್ನಲ್ಲಿ ಸ್ಪಷ್ಟ ಮೊಹರೊತ್ತಿತ್ತು. ನಕ್ಷತ್ರಗಳನ್ನು ಎಣಿಸಿ, ಗುಣಿಸಿ ಸೋತ, ಆಕಾಶದ ಹರವು ಕಂಡು ಆಸೆಪಟ್ಟ, ಅಗಾಧ ಸಾಗರದ ನಡುವೆ ಕುಳಿತು ಹಾಯಿದೋಣಿಗಾಗಿ ಹಂಬಲಿಸುತ್ತಿದ್ದ ನನಗೆ ನೀನು, ಚಿಗುರುವ ಕನಸಿನ ಸನಿಹದ ಆಸರೆಯ ಮರವಾಗಿ ಕಂಡೆ ಅಷ್ಟೆ.

ಮಳೆ ಹೊಯ್ದು ಹದವಾದ ನೆಲದಲ್ಲಿ ಚಿಗುರು ಕೊನರಿ ಗಿಡವಾಯ್ತು, ಬಳ್ಳಿಯಾಯ್ತು ಮತ್ತು ಹಬ್ಬಿತು. ಆಸರೆಗೆ ಮರವಿದೆಯೆಂಬ ವಿಶ್ವಾಸ ಅದಕ್ಕಿತ್ತು. ನಿಜಕ್ಕೂ ನನಗಿವತ್ತು ಪಚ್ಚೆನಿಸುತ್ತಿದೆ. ಹಾದಿ ಸಿಕ್ಕಿದ ನಾನು ಕೊನೆಯ ಕುರಿತು ಯೋಚಿಸುವುದನ್ನು ಮರೆತು ಬಿಟ್ಟೆನಲ್ಲಾ ಎಂದು. ಹೋಗಲಿ ಬಿಡು, ನನಗಾಗ ಹತ್ತರೊಡನೆ ಹನ್ನೊಂದಾಗಬಾರದೆಂಬ ಮೊಂಡ ತನವೂ ಇತ್ತು. ಈಗಲೂ ಇದೆ. ಆದರೆ ಅದರ ತೀವ್ರತೆಗೆ ರೂಪು ರೇಖೆಗಳನ್ನೆಳೆದಿದ್ದೇನೆ. ನಿನಪಿಡು, ರೇಖೆಗಳೆಲ್ಲಾ ಚೌಕಟ್ಟಾಗಬೇಕೆಂದಿಲ್ಲ. ಚೌಕಟ್ಟು ಅಥವಾ ಮೇರೆಯೆಂಬುದು ವ್ಯಕ್ತಿಯ ಚಲನೆಯನ್ನು ನಿಯಂತ್ರಿಸಿ ಆತನ ವಿಪರಿಮೀತ ಬೆಳವಣಿಗೆಗೆ ತಡೆಯೊಡ್ಡುತ್ತದೆಂಬ ಅಚಲ ವಿಶ್ವಾಸ ನನಗೆ. ನಿಯಂತ್ರಿಸುವಿಕೆ, ಸ್ವಾತಂತ್ರ್ಯವಿಲ್ಲದ ಸ್ಥಿತಿಯ ಇನ್ನೊಂದು ರೂಪು. ಅದು ಬಂಧನ. ಬಂಧನವಿದ್ದಲ್ಲಿ ಬೆಳವಣಿಗೆ ಪೂರ್ವಾಗ್ರಹ ಪೀಡಿತ ತಾನೇ? ನೀನು ಒಪ್ಪಲೇ ಬೇಕು.

ನಾನು ಕವನ ಬರೀತಿದ್ದೆ ನೆನಪಿದೆಯಾ? ಅದೇನ್ ಬರೀತೀಯೋ ಮಾರಾಯಾ? ನಂಗಂತೂ ತಲೆಬುಡ ಅರಿಯೊಲ್ಲ ಅಂದಿದ್ದೆ ನೀನು. ನಾನು ನಕ್ಕಿದ್ದೆ! ಇವತ್ತು ಹೇಳುತ್ತೇನೆ. ನನ್ನೊಳಗಿನ ನಾನು ಹೊರಬಂದು ಮಲಗಿದರೆ ಕವನವಾಗುತ್ತಿತ್ತು. ನನ್ನೊಳಗಿನ ನಾನೇ ಸ್ಪಷ್ಟವಾಗಿಲ್ಲದಿದ್ದ ಕಾರಣ ಬರವಣಿಗೆಯೂ ಅಸ್ಪಷ್ಟವೆನಿಸುತ್ತಿತ್ತು. ಆದ್ದರಿಂದಲೇ ನನ್ನ ಬರಹಗಳು ಹಾಗೇ ಒಂಥರಾ ನಿನ್ನ ಹಾಗೆ!

ನೀನು ಬಾಲ್ಯದ ಹುಡುಗಾಟಗಳನ್ನೆಲ್ಲಾ ದಾಟಿ, ತಾರುಣ್ಯದ ಬಿಸುಪು, ಪ್ರಬುದ್ಧತೆ, ಮತ್ತೊಂದಿಷ್ಟು ಅನುಭವಗಳ ಬತ್ತಳಿಕೆ ಹೊತ್ತಿದ್ದೆ. ಹೊಸ ಹಾದಿಗಳ ಹುಡುಕಿ ಸವೆಸುವ ಪ್ರಯೋಗಶೀಲ ಮನಸ್ಸೂ ನಿಂದಾಗಿತ್ತು. ಪ್ರತಿ ಮುಂಜಾವು ಮೂಡುವ ರವಿ ನಿನ್ನಲ್ಲಿ ಹೊಸ ಕನಸುಗಳ ಅರಳಿಸುತ್ತಿದ್ದ. ಅದನ್ನು ಕಾವಲು ಕಾಯಲು ನಾನಿದ್ದೆನೆಂಬ ಧೈರ್ಯ ನಿನಗೆ ಹುಟ್ಟಲಿಲ್ಲ ಅಷ್ಟೆ. ಅಥವಾ ಇವೆಲ್ಲಕ್ಕೂ ಮಿಗಿಲಾದ ಮತ್ತಿನ್ನೇನೋ ನಿನಗೆ ಬೇಕೆನಿಸಿತು ಇಲ್ಲವೇ ಇವೆಲ್ಲಾ ಸಾಕೆನಿಸಿತು. ನಾನು ಪ್ರತಿಯಾಡುವುದಿಲ್ಲ ಗೆಳತಿ ಅದಕ್ಕೆ. ನನಗೆ ಗೊತ್ತು ಬದುಕು ಬದುಕುವವರಿಚ್ಛೆ! ಬದಲಾಯಿಸುವುದು ಕಷ್ಟ ಸಾಧ್ಯ, ಊಹುಂ ಬದಲಾಯಿಸಲು ಬಾರದು. ಮಾದರಿಯಾಗಬಹುದಷ್ಟೇ.

ಮರಕ್ಕೆ ಬಂದಳಿಕೆ ಬಂದಂಟಿದ ಸನ್ನಿವೇಶ ನನಗೆ ನೆನಪಿಲ್ಲ ಇವತ್ತು. ನಿನಗೆ ಧಾರಿಣಿಯೊಡನೆಗಿನ ಸಂಬಂಧ ಮತ್ತಷ್ಟು ಆಪ್ತಬಾಗಬೇಕೆಂದು ಅನ್ನಿಸಿರಲಿಕ್ಕೂ ಸಾಕು ಅವತ್ತು. ಕಾರಣಗಳಿಗಿಂತ ಸಾಧನೆ, ಪರಿಣಾಮ ಮುಖ್ಯವಲ್ಲವೇ? ಬಿಡು…

ಅವತ್ತು ಅಮ್ಮನೊಡನೆ ಅಮ್ಮಾ ನಂಗಿವತ್ತು ನಿನ್ನ ಮಡಿಲು ಬೇಕಿಲ್ಲ, ಒಬ್ಬನೇ ಮಲಗಿ ಕಾದು ನಿಂತ ಕನಸುಗಳಿಗೆ ಸ್ವಾಗತ ಕೋರುತ್ತೇನೆ ಎಂದಾಗಲೇ ಮೋಡ ಕಟ್ಟಿತ್ತು. ಜೋರು ಮಳೆ ಶುರುವಾಗಿದ್ದು ಅಂದುಕೊಂಡಿದ್ದಕ್ಕಿಂತ ಬೇಗ. ಗಾಳಿಯ ಅರ್ಭಟವೂ ಜೋರಿತ್ತು. ಮರ ಮುರಿದು ಬಿತ್ತು. ಅನಾಥವಾಗಲಿಲ್ಲ! ಬದಲಾಗಿ ಇನ್ನೊಂದು ಮರದ ಅರಸುವಿಕೆಗೆ ತೊಡಗಿತು. ನನಗೆ ಎಚ್ಚರವಾಯ್ತು.

ಬಹುಶಃ ಭವಿಷ್ಯದ ಕನಸನ್ನೂ ಹೇಳುವುದು ಪ್ರಸ್ತುತವೆನಿಸುತ್ತಿದೆ. ಇವನ್ನೆಲ್ಲವನ್ನೂ ನೀನು ಓದಲೇ ಬೇಕೆಂಬ ಕಟ್ಟುನಿಟ್ಟು ನಾ ಹಾಕೊಲ್ಲ. ಈ ಬರಹದ ಮೂಲಕ, ನೀನು ನನ್ನೆಲ್ಲಾ ಭಾವನೆಗಳನ್ನು ಗುಡಿಸಿ ಹಾಕಿದೆ ಎಂಬ ಆರೋಪ ಮಾಡುವ ಮನಸ್ಸೂ ನನ್ನದಲ್ಲ. ನನ್ನೊಬ್ಬಳು ಗೆಳತಿ ಹೇಳಿದ್ದಳು ಭಾವುಕತೆಯಿಂದ ಬುದ್ಧಿ ಕುಂಠಿತವಂತೆ. ನಾನಿಷ್ಟು ಹೊತ್ತು ಹೊತ್ತುಕೊಂಡಿದ್ದು ಅದನ್ನೇ. ಭಾವೋತ್ಕರ್ಷವೇ ಇಷ್ಟೆಲ್ಲಾ ಸಾಲುಗಳ ಜನುಮಕ್ಕೆ ಕಾರಣ. ನಾನು ಭಾವನಾ ಜೀವಿ ನಿಜ. ಇವತ್ತಿಗೂ ನನ್ನ ಕಂಪ್ಯೂಟರ್, ಐ ಪಾಡ್ ಗಳಲ್ಲಿ ತುಂಬಿರುವುದು ಅಪ್ಪಟ ಭಾವಗೀತೆ, ಶಾಸ್ತ್ರೀಯಗಳೇ. ಉನ್ನಿಕೃಷ್ಣನ್ ನಂಗೆ ಯಾವತ್ತೂ ಇಷ್ಟ ಅಂತ ನಿಂಗೂ ಗೊತ್ತು. ನಾನು ಆತನ ಅನಿಲ ತರಲ ಹಾಡನ್ನು ಮತ್ತೆ ಮತ್ತೆ ಕೇಳ್ತಿದ್ದಾಗ ನೀನು ಉರಿಬಿದ್ದಿದ್ದು, ಟೇಸ್ಟೇ ಇಲ್ಲ ನಿಂಗೆ ಅಂತ ಜರಿದಿದ್ದು ಎಲ್ಲಾ ನೆನಪಿದೆ ನಂಗೆ. ಆದರೂ ನಾನವತ್ತು ನೊಂದುಕೊಂಡಿರಲಿಲ್ಲ. ನಾನು ಬೇಸರಿಸಿಕೊಂಡರೆ ನೀನು ಪರಿತಾಪ ಪಡುವೆಯೆಂಬ ಗುಮನಿಯಿತ್ತು ನಂಗೆ.

ಇವತ್ತು ನಾನು ಖುಷಿಯಿಂದ ಹೇಳುವುದಿಷ್ಟೇ. ನನ್ನನ್ನು ತೊರೆದು ಹೋಗಿದ್ದಕ್ಕೆ ನಿನಗೆ ಭರಿಸಲಾರದಷ್ಟು ಥ್ಯಾಂಕ್ಸ್ ! ಅದೇ ನಗೆ ಬದುಕಿನ ಸಾಧ್ಯತೆಗಳನ್ನು, ವಿಕ್ಷಿಪ್ತತೆಗಳನ್ನು ಗಾಢವಾಗಿ ಪರಿಚಯಿಸಿದ್ದು. ನನಗೀಗ ಬಳ್ಳಿಯಾಗಿ ಬದುಕುವ ಹಂಬಲವಿಲ್ಲ. ಮರವಾಗಬೇಕು. ಲೆಕ್ಕ ತಪ್ಪಿಹೋಗುವಷ್ಟು ಬಳ್ಳಿಗಳನ್ನು ಪೊರೆಯಬೇಕು. ಬಳ್ಳಿಗಳೆಲ್ಲಾ ಬಲವಾದ ಮೇಲೊಮ್ಮೆ ಜೋರು ಮಳೆ, ಸಿಡಿಲಿಗೆ ಸಿಕ್ಕಿ ಜರ್ಜರಿತಗೊಂಡು ಬಿದ್ದು, ಭೂಮಿಯ ನಡುವೆ ಕರಗಿ ಕಳೆದು ಹೋಗೇಕು, ಅಷ್ಟೇ… ನನಗೀಗ ಮತ್ತೆ ನಕ್ಷತ್ರಗಳನ್ನು ಎಣಿಸುವಾಸೆ, ಮುಗಿಲು ಮುಟ್ಟುವಾಸೆ, ಶತಮಾನಗಟ್ಟಲೆ ದೋಣಿಗಾಗಿ ಕಾಯಬೇಕೆಂಬ ಬಯಕೆ, ಎಲ್ಲಕ್ಕಿಂತ ಹೆಚ್ಚಾಗಿ ಇವೆಲ್ಲಾ ನನ್ನಿಂದ ಮತ್ತು ನನ್ನೊಬ್ಬನಿಂದಲೇ ಸಾಧ್ಯವೆಂಬ ಅಚಲ ನಂಬಿಕೆ.

ಮತ್ತೊಮ್ಮೆ ಥ್ಯಾಂಕ್ಸ್, ಎಲ್ಲದಕ್ಕೂ…

ಬೆಕ್ಕುಗಳಿಗೆ ಬಡಿವಾರವಿಲ್ಲ
ಮೆಲ್ಲನೆ ತೊಡೆಗೇರಿಸುತ್ತವೆ ಗಲ್ಲ
ಹೆಂಗಸರೋ ಗಂಡಸರೋ
ಅಥವಾ ಮತ್ತಿನ್ಯಾರೋ
ವಯಸಿನಂತರವೂ ಇಲ್ಲ
ಲಿಂಗ ಬೇಧವೂ ಇಲ್ಲ
ಉಣ್ಣುವ, ಮಲಗುವ
ಮುಂಚಿನ ಹೊರತು ರಿವಾಜೂ ಸಲ್ಲ!
ಮಡಿಲು ಬೆಚ್ಚಗಿದ್ದರೆ ಸರಿ

ಮಡಿಲೇರಿದ ಬೆಕ್ಕು
ಅಂಗಾಲು ಅಗಲಿಸಿ ನೆಕ್ಕು
ನೀಟಾಗಿ ಮಡಿಸಿ ಮಲಗಿ-
ದರೆ ದೃಷ್ಟಿಯಾಗಬೇಕು
ಮರುದಿನ ತಟ್ಟೆಗೆ ಹಾಕಿದ
ಹಾಲನ್ನೂ ಬಿಡೋವಷ್ಟು
ಅಥವಾ ಕುಡಿದು ಬಿಡೋವಷ್ಟು!

ಪಾಪಿ ಬೆಕ್ಕುಗಳು ಪಾಪದ
ಹಕ್ಕಿಗಳನ್ನು ಹೊಟ್ಟೆಗಾಕಿಕೊಳ್ಳುತ್ತವೆ
ಬರೀ ಚಕ್ಕಳದ ಗೂಡಿನ
ಚೆಂದದ ಬಟ್ಟೆತೊಟ್ಟವಾದರೂ
ತಿನ್ನುವ ಚಪಲವೇಕೋ?
ಮೊನ್ನೆ ಚಿಟ್ಟೆಯ ರೆಕ್ಕೆಯ
ಬಣ್ಣದ ರವೆ ನಮ್ಮನೆ ಬೆಕ್ಕಿನ
ಬಲ ಮೀಸೆಗಂಟಿತ್ತು!

ಬೆಕ್ಕು ನಮ್ಮನೆಯದೋ?
ಲಂಡನ್ನಿನ ರಾಣಿಯದೋ?
ಉದ್ದದ ನಿಲುವಂಗಿ ತೊಟ್ಟ
ಮಾಯಾಂಗನೆಯದೋ?
ಬೆಕ್ಕು ಬೆಕ್ಕಲ್ಲದೇ ಮತ್ತೇನಲ್ಲ!!!

                        

ಚಕ್ರ

 ಆಕೆಗೋ ತುಂಬಿದ ಬಸಿರು. ಹೊರಗೆ ಮಳೆರಾಯ ರಚ್ಚೆ ಹಿಡಿದ ಮಗುವಿನಂತೆ ಉಧೋ ಎಂದು ಒಂದೇ ಸಮನೆ ಬಿಡುವು ಕೊಡದೆ ಸುರಿಯುತ್ತಿದ್ದಾನೆ. ಮೂರು ವರ್ಷಕ್ಕೆ ಮುಂಚೆಯೇ ಲಾಟರಿಯಲ್ಲಿ ಬಂದ ಮೋಟಾರು ಕಾರಿನಲ್ಲಿದ್ದ ಹನಿ ಪೆಟ್ರೋಲ್ ಒಮ್ಮೆ ಆಘ್ರಾಣಿಸುವಷ್ಟರಲ್ಲೇ ಇಂಗಿ ಹೋಯಿತು. ಮಾವ ಕೊಟ್ಟ ಬೈಕನಲ್ಲೇ ಹೋಗಿ ವೈದ್ಯರನ್ನು ಕರೆತರೋಣವೆಂದರೆ, ಅದರ ಒಂದು ಚಕ್ರ ಎಂದೋ ಟುಸಾಗಿತ್ತು. ಈ ನಡುವೆ ಮೂಲೆಯಲ್ಲಿ ಸ್ವಂತ ದುಡಿಮೆಯಲ್ಲಿ ಕೊಂಡ ಇಪ್ಪತ್ತ್ನಾಲಕ್ಕಿಂಚಿನ ಗಟ್ಟಿ ಮುಟ್ಟಾದ ಸೈಕಲ್ ನನ್ನನ್ನೇ ನೋಡಿ ಅಣಕಿಸಿದಂತೆ ಭಾಸವಾಯಿತು!
* * *

ಮಗ ನಿರಾಳನಿಗೆ ಈಗ ಭರ್ತಿ ಹನ್ನೆರಡು ವಸಂತಗಳು. ಅವನಿಗೆ ಬೈಕ್ ಹೇಳಿಕೊಡಬೇಕಂತೆ. ಅದಕ್ಕೆ ಮೊದಲು ಸೈಕಲ್ ಕಲಿ ಎಂದು ನಾನು ಹೇಳಿದ್ದು ಅವನ ಕಿವಿಗೆ ಬಿದ್ದಂತಿಲ್ಲ.
* * *           
 ನಿರಾಳನ ಮಡದಿಗೀಗ ಹೆರುವ ಸಂಕಟ. ಮನೆಯಲ್ಲಿದ್ದ ಕಾರು, ಬೈಕ್‌ಗಳು ಕಳೆದೆರಡು ತಿಂಗಳಿಗೆ ಮೊದಲೇ ಮಾಡಿದ್ದ ಸಾಲ ತೀರಿಸಲಾಗದೇ ಹರಾಜಾಗಿ ಹೋದವು. ಮತ್ತದೇ ಸೈಕಲ್ ಮೂಲೆಯಿಂದ ಕಣ್ಣು ಮಿಟುಕಿಸುತ್ತಿತ್ತು. ನಿರಾಳ ಅದನ್ನು ನೋಡಿ ಸುಮ್ಮನೇ ನಿಡುಸುಯ್ದನಷ್ಟೇ….. ಈಗ ಮತ್ತೆ ಅಂತಹುದೇ ಮಳೆ, ಕೊಚ್ಚೆ ರಸ್ತೆ, ಹಳೇ ಸೈಕಲ್. ಆದರೆ ಮೈಚರ್ಮ ನೆರಿಗೆಗಟ್ಟಿರುವ ನಾನು ಸೈಕಲ್ ತುಳಿಯುತ್ತಿರುವೆ!
 * * *